ನೀರು ಪೋಲು ಮಾಡಿದರೆ ಬೀಳುತ್ತೆ ₹5,000 ಫೈನ್! ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರು ಬಳಕೆಗೆ BWSSB ಕಠಿಣ ನಿಷೇಧ.
ವರದಿಗಾರರು (Reporter)
Hemanth Rajashekar12:50 AM IST

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರೇ ಎಚ್ಚರ! ಮಳೆಯ ಕೊರತೆ ಮತ್ತು ಎಲ್ ನಿನೋ ಪರಿಣಾಮದಿಂದಾಗಿ ರಾಜಧಾನಿಯಲ್ಲಿ ಭೀಕರ ನೀರಿನ ಅಭಾವ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಬೆಂಗಳೂರು ಜಲಮಂಡಳಿ (BWSSB) ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಕುಡಿಯುವ ನೀರನ್ನು ಅನಗತ್ಯ ಮತ್ತು ಇತರೆ ಇರಕಲು ಕೆಲಸಗಳಿಗೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಜಲಮಂಡಳಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರ್ವಜನಿಕರು ಹಾಗೂ ವಾಣಿಜ್ಯ ಸಂಸ್ಥೆಗಳು ಕುಡಿಯುವ ನೀರನ್ನು (Potable Water) ಈ ಕೆಳಗಿನ ಕೆಲಸಗಳಿಗೆ ಬಳಸುವಂತಿಲ್ಲ:
- ವಾಹನಗಳನ್ನು ತೊಳೆಯುವುದು.
- ತೋಟಗಾರಿಕೆ ಮತ್ತು ಗಿಡಗಳಿಗೆ ನೀರು ಹಾಕುವುದು.
- ಕಟ್ಟಡ ಹಾಗೂ ರಸ್ತೆ ಸೇರಿದಂತೆ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳು.
- ರಸ್ತೆ ಮತ್ತು ಕಾಲುದಾರಿಗಳನ್ನು (ಫುಟ್‌ಪಾತ್) ಸ್ವಚ್ಛಗೊಳಿಸುವುದು.
- ಅಲಂಕಾರಿಕ ಕಾರಂಜಿಗಳಲ್ಲಿ ನೀರು ಬಳಸುವುದು.
- ಸಾರ್ವಜನಿಕ ಅಥವಾ ಖಾಸಗಿ ಈಜುಕೊಳಗಳನ್ನು ತುಂಬಿಸುವುದು ಸೇರಿದಂತೆ ಇತರೆ ಯಾವುದೇ ಅನಗತ್ಯ ಉದ್ದೇಶಗಳು.
ಉಲ್ಲಂಘಿಸಿದರೆ ₹5,000 ದಂಡ: ಜಲಮಂಡಳಿ ಖಡಕ್ ವಾರ್ನಿಂಗ್!
“ಪ್ರತಿ ಹನಿಯೂ ಅಮೂಲ್ಯ” ಎಂದು ಎಚ್ಚರಿಸಿರುವ ಬಿಡಬ್ಲ್ಯೂಎಸ್‌ಎಸ್‌ಬಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಮೊದಲ ಬಾರಿಗೆ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಬರೋಬ್ಬರಿ ₹5,000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅದೇ ತಪ್ಪನ್ನು ಪದೇ ಪದೇ ಮುಂದುವರಿಸಿದರೆ, ನಿಯಮ ಪಾಲಿಸುವವರೆಗೂ ಪ್ರತಿದಿನ ₹500 ಹೆಚ್ಚುವರಿ ದಂಡವನ್ನು ತೆರಬೇಕಾಗುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಜುಲೈ 31ರೊಳಗೆ ಏರೇಟರ್ ಅಳವಡಿಕೆ ಕಡ್ಡಾಯ
ಬೆಂಗಳೂರಿನಲ್ಲಿ ಅತಿ ಹೆಚ್ಚು ನೀರು ಬಳಕೆಯಾಗುವ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಜಲಮಂಡಳಿ ಕಟ್ಟುನಿಟ್ಟಿನ ಗಡುವು ನೀಡಿದೆ. 2026ರ ಜುಲೈ 31ರ ಒಳಗಾಗಿ ಈ ಎಲ್ಲಾ ಕಟ್ಟಡಗಳ ನಳಗಳಿಗೆ ನೀರಿನ ಹರಿವನ್ನು ನಿಯಂತ್ರಿಸುವ ‘ಫ್ಲೋ ರಿಸ್ಟ್ರಿಕ್ಟರ್’ ಅಥವಾ ‘ಏರೇಟರ್’ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಗಡುವಿನೊಳಗೆ ಏರೇಟರ್ ಅಳವಡಿಸದಿದ್ದರೆ, ಆಯಾ ಕಟ್ಟಡಗಳಿಗೆ ಸರಬರಾಜು ಮಾಡುವ ನೀರಿನ ಪ್ರಮಾಣದಲ್ಲಿ ಶೇಕಡಾ 50 ರಷ್ಟು ಕಡಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ತಳ ಮುಟ್ಟುತ್ತಿರುವುದರಿಂದ, ಲಭ್ಯವಿರುವ ಸಂಸ್ಕರಿಸಿದ ಶುದ್ಧ ಕುಡಿಯುವ ನೀರನ್ನು ಕೇವಲ ಅಗತ್ಯ ಬಳಕೆಗೆ ಹಾಗೂ ಕುಡಿಯಲು ಮಾತ್ರ ಕಾಯ್ದಿರಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಎಲ್ಲಿಯಾದರೂ ನೀರು ಪೋಲಾಗುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಜಲಮಂಡಳಿಯ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: