ಶಿವಾಜಿನಗರದಲ್ಲಿ ಉದ್ವಿಗ್ನತೆ: ಜಿಬಿಎ ಅಧಿಕಾರಿಗಳ ಮೇಲೆ ಅಟ್ಟಾಡಿಸಿ ಹಲ್ಲೆ, ಪೆಪ್ಪರ್ ಸ್ಪ್ರೇ ದಾಳಿ! ಸೂತ್ರಧಾರ ಬಸವರಾಜ್ ಬಂಧನ, ವಿಪಕ್ಷಗಳ ತೀವ್ರ ವಾಗ್ದಾಳಿ.
ವರದಿಗಾರರು (Reporter)
Hemanth Rajashekar04:25 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿದ್ದ ಜಿಬಿಎ (GBA) ಅಧಿಕಾರಿಗಳ ಮೇಲಿನ ರಕ್ತಸಿಕ್ತ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ದಾಳಿಯ ಮುಖ್ಯ ರೂವಾರಿ, ‘ನಮ್ಮ ಕರ್ನಾಟಕ ಸೇನೆ’ಯ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆಯನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಸೇಫ್ ಫುಟ್‌ಪಾತ್’ ಅಭಿಯಾನದ ವೇಳೆ ನಡುಬೀದಿಯಲ್ಲೇ ಅಟ್ಟಹಾಸ
ಮಂಗಳವಾರ ಶಿವಾಜಿನಗರದ ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ‘ಸೇಫ್ ಫುಟ್‌ಪಾತ್’ (Safe Footpath Campaign) ಅಭಿಯಾನದಡಿ ಜಿಬಿಎ ಅಧಿಕಾರಿಗಳು ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುತ್ತಿದ್ದರು. ಈ ವೇಳೆ ‘ಸರ್ಕಾರಿ ಅಧಿಕಾರಿಗಳು’ ಎಂಬ ಕನಿಷ್ಠ ಕಳಕಳಿಯೂ ಇಲ್ಲದೆ ಬಸವರಾಜ್ ಪಡುಕೋಟೆ ನೇತೃತ್ವದ ಗ್ಯಾಂಗ್ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಹತ್ತಾರು ಜನರೊಂದಿಗೆ ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದೆ.
ಕೈಗೆ ಸಿಕ್ಕ ಸಿಕ್ಕ ಪ್ಲಾಸ್ಟಿಕ್ ಚೇರ್, ಡಸ್ಟ್‌ಬಿನ್ ಮತ್ತು ಕಲ್ಲುಗಳಿಂದ ಎಇಇ (AEE) ಮಾಧವ್ ರಾವ್, ಅಧಿಕಾರಿಗಳಾದ ಗೌತಮ್ ಹಾಗೂ ರುಚಿತಾ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅಷ್ಟಕ್ಕೇ ನಿಲ್ಲದೆ ಅಧಿಕಾರಿಗಳ ಕಣ್ಣು, ಮುಖಕ್ಕೆ ಪ್ರತ್ಯಕ್ಷವಾಗಿ ಪೆಪ್ಪರ್ ಸ್ಪ್ರೇ (Pepper Spray) ಬಡಿದು ಭೀಕರ ಕೃತ್ಯ ಎಸಗಲಾಗಿತ್ತು. ತೀವ್ರವಾಗಿ ಗಾಯಗೊಂಡ ಅಧಿಕಾರಿಗಳನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸವರಾಜ್ ಕ್ರಿಮಿನಲ್ ಹಿನ್ನೆಲೆ ದೃಢ – ಬಂಧಿತರ ಸಂಖ್ಯೆ 11ಕ್ಕೆ ಏರಿಕೆ!
ಬಂಧಿತ ಮುಖ್ಯ ಆರೋಪಿ ಬಸವರಾಜ್ ಪಡುಕೋಟೆ ಹಳೆಯ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ ಎಂದು ಬೆಂಗಳೂರು ನಗರ ಪೊಲೀಸರು ದೃಢಪಡಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಆರಂಭದಲ್ಲಿ 10 ಮಂದಿ ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದರು. ಇದೀಗ ಮುಖ್ಯ ಸೂತ್ರಧಾರ ಬಸವರಾಜ್ ಪಡುಕೋಟೆ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಿಎನ್‌ಎಸ್ ಕಾಯ್ದೆ (BNS 2023) ಅಡಿಯಲ್ಲಿ ಗಂಭೀರ FIR ದಾಖಲು
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಅಡಿಯಲ್ಲಿ ವಿವಿಧ ಗಂಭೀರ ನಿಯಮಾವಳಿಗಳನ್ನು ಅನ್ವಯಿಸಿ ಎಫ್‌ಐಆರ್ ದಾಖಲಿಸಲಾಗಿದೆ.
- ದಾಖಲಾಗಿರುವ ಬಿಎನ್‌ಎಸ್ ಸೆಕ್ಷನ್‌ಗಳು:
109(1),132,74,351(2),352,190ಹಾಗೂ121(1). - ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ಪ್ರಾಣಾಪಾಯ ಉಂಟುಮಾಡುವ ರೀತಿಯಲ್ಲಿ ಹಲ್ಲೆ ನಡೆಸಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದಿರುವುದಕ್ಕಾಗಿ ಈ ಕಠಿಣ ಪ್ರಕರಣಗಳನ್ನು ಹೂಡಲಾಗಿದೆ.
ಬಂಧಿತ ಸೂತ್ರಧಾರ ಬಸವರಾಜ್ ನೀಡಿದ ಸ್ಪಷ್ಟನೆ
ಪೋಲಿಸ್ ವಶದಲ್ಲಿದ್ದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯ ಆರೋಪಿ ಬಸವರಾಜ್, ಗಲಾಟೆಗೆ ಗಣೇಶ ದೇವಸ್ಥಾನ ಹಾಗೂ ಕನ್ನಡ ಧ್ವಜ ವಿಚಾರವೇ ಕಾರಣವೆಂದು ವಿಭಿನ್ನ ಹೇಳಿಕೆ ನೀಡಿದ್ದಾನೆ:
“ಫುಟ್‌ಪಾತ್ ತೆರವು ವಿಚಾರಕ್ಕೂ ನಮ್ಮ ಗಲಾಟೆಗೂ ಯಾವುದೇ ಸಂಬಂಧವಿಲ್ಲ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ವರ್ಷಗಳಿಂದ ಇದ್ದ ಗಣೇಶನ ದೇವಸ್ಥಾನ ಹಾಗೂ ಅಲ್ಲಿ ಹಾರಾಡುತ್ತಿದ್ದ ಕನ್ನಡ ಧ್ವಜವನ್ನು ತೆಗೆದುಹಾಕಲು ಜಿಬಿಎ ಅಧಿಕಾರಿಗಳು ಯತ್ನಿಸುತ್ತಿದ್ದರು. ಗಣೇಶನ ದೇವಸ್ಥಾನ ಒಡೆದುಹಾಕಿ, ಕನ್ನಡ ಬಾವುಟ ತೆಗೆದುಹಾಕಿ ಎಂದು ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಇದನ್ನು ನಾನು ಪ್ರಶ್ನಿಸಲು ಹೋದಾಗ ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಈ ಗಲಾಟೆ ಆರಂಭವಾಯಿತು.”
ಆದರೆ, ಪೊಲೀಸರು ಬಸವರಾಜ್‌ನ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ ಕೇವಲ ಪ್ರಕರಣದಿಂದ ನುಣುಚಿಕೊಳ್ಳಲು ಹಾಗೂ ಹಲ್ಲೆಯನ್ನು ಸಮರ್ಥಿಸಿಕೊಳ್ಳಲು ಈ ರೀತಿ ಕಟ್ಟುಕಥೆ ಹೇಳುತ್ತಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಆದೇಶ & ವಿಪಕ್ಷಗಳ ಆಕ್ರೋಶ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವ ಕೃಷ್ಣಬೈರೇಗೌಡ, ಕೋರ್ಟ್ ಆದೇಶ ಹಾಗೂ ಸರ್ಕಾರದ ನಿರ್ದೇಶನದಂತೆ ಫುಟ್‌ಪಾತ್ ತೆರವುಗೊಳಿಸುತ್ತಿದ್ದ ಅಧಿಕಾರಿಗಳ ಮೇಲೆ ಕೈ ಎತ್ತಿದ ಆರೋಪಿಗಳಿಗೆ ತಕ್ಕ ಪಾಠ ಕಲಿಸುವಂತೆ ಉನ್ನತ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ, ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿವೆ. “ನಡುರಸ್ತೆಯಲ್ಲಿ ರಾಜಾರೋಷವಾಗಿ ಸರ್ಕಾರಿ ಅಧಿಕಾರಿಗಳ ಮೇಲೆ ಗ್ಯಾಂಗ್ ಕಟ್ಟಿಕೊಂಡು ಪೆಪ್ಪರ್ ಸ್ಪ್ರೇ ದಾಳಿ ನಡೆಸುವ ಮಟ್ಟಕ್ಕೆ ಕ್ರಿಮಿನಲ್‌ಗಳಿಗೆ ಧೈರ್ಯ ಬಂದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ” ಎಂದು ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: