ಕರ್ತವ್ಯದ ವೇಳೆಯಲ್ಲೇ ಎಣ್ಣೆ ಪಾರ್ಟಿ: ಬೆಂಗಳೂರು ಗ್ರಾಮಾಂತರದ 6 PDOಗಳು ಅಮಾನತು!
ವರದಿಗಾರರು (Reporter)
Hemanth Rajashekar06:06 AM IST

ಬೆಂಗಳೂರು: ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕಾಗಿದ್ದ ಸರ್ಕಾರಿ ಅಧಿಕಾರಿಗಳು, ಕೆಲಸದ ವೇಳೆಯಲ್ಲೇ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಮದ್ಯಪಾನ ಕೂಟದಲ್ಲಿ ಭಾಗಿಯಾಗಿ ಇದೀಗ ಜೈಲು ಪಾಲಾಗುವ ಹಂತ ತಲುಪಿದ್ದಾರೆ. ಕೆಲಸದ ಸಮಯದಲ್ಲಿ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ನೆಲಮಂಗಲ ತಾಲೂಕಿನ ಸಿದ್ಧರಬೆಟ್ಟದ ಸಮೀಪ ಜುಲೈ 24ರಂದು ಈ ಘಟನೆ ನಡೆದಿದೆ. ವಿವಿಧ ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿ ವೇಳೆಯಲ್ಲೇ ಸಿದ್ಧರಬೆಟ್ಟದ ಸಮೀಪಬಳಿ ಒಗ್ಗೂಡಿ ಮದ್ಯಪಾನ ಪಾರ್ಟಿ ನಡೆಸಿದ್ದಾರೆ ಎನ್ನಲಾದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಈ ದೃಶ್ಯಗಳನ್ನು ಗಮನಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಮಾಧ್ಯಮ ವರದಿಗಳ ಬೆನ್ನಲ್ಲೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು.

ಅಮಾನತುಗೊಂಡ PDOಗಳ ವಿವರ
ಸಚಿವರ ನಿರ್ದೇಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡಾ. ವಸಂತಿ ಅಮರ್ ಅವರು ತನಿಖೆ ಕಾಯ್ದಿರಿಸಿ ಈ ಕೆಳಗಿನ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ:
- ಗಿರೀಶ್ – ಶಿವಗಂಗೇ ಗ್ರಾಮ ಪಂಚಾಯತಿ
- ಹರೀಶ್ – ಅಗಲಕೋಟೆ ಗ್ರಾಮ ಪಂಚಾಯತಿ
- ಪ್ರಶಾಂತ್ ಡಿ. – ಗೊಲ್ಲಹಳ್ಳಿ ಗ್ರಾಮ ಪಂಚಾಯತಿ
- ಚಿರಂಜೀವಿ – ಮಣ್ಣೆ ಗ್ರಾಮ ಪಂಚಾಯತಿ
- ರವಿಶಂಕರ್ – ಸೋಂಪುರ ಗ್ರಾಮ ಪಂಚಾಯತಿ
- ದಿನೇಶ್ ಬಿ.ಎಂ. – ಬೆಟ್ಟಕೋಟೆ ಗ್ರಾಮ ಪಂಚಾಯತಿ
ಸೇವಾ ನಿಯಮ ಉಲ್ಲಂಘನೆ
ಅಮಾನತು ಆದೇಶದಲ್ಲಿ ಉಲ್ಲೇಖಿಸಿರುವಂತೆ, ಈ ಅಧಿಕಾರಿಗಳು ‘ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 2021’ ರ ನಿಯಮಗಳನ್ನು ತೀವ್ರವಾಗಿ ಉಲ್ಲಂಘಿಸಿದ್ದಾರೆ. ಕಚೇರಿ ವೇಳೆಯಲ್ಲಿ ಸಾರ್ವಜನಿಕರಿಗೆ ಸಿಗದೆ, ಕರ್ತವ್ಯ ಲೋಪ ಎಸಗಿರುವುದು ಗಂಭೀರ ದುರ್ನಡತೆ ಎಂದು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರು ಸಾರ್ವಜನಿಕರ ಆಸ್ತಿಯಂತೆ ಕೆಲಸ ಮಾಡಬೇಕಾದ ಸಮಯದಲ್ಲಿ ಇಂತಹ ಬೇಜವಾಬ್ದಾರಿ ಪ್ರದರ್ಶಿಸಿರುವುದು ಇಲಾಖೆಗೆ ಕಪ್ಪುಚುಕ್ಕೆಯಾಗಿದ್ದು, ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೆ ಈ ಅಮಾನತು ಜಾರಿಯಲ್ಲಿರಲಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ವಿಶ್ವ ಹುಲಿ ದಿನದ ಇತಿಹಾಸ ಮತ್ತು ಮಹತ್ವ! ಕಾಡು ಉಳಿದರೆ ಹುಲಿ, ಹುಲಿ ಉಳಿದರೆ ನಾವು. ಕರ್ನಾಟಕಕ್ಕೆ 2ನೇ ಸ್ಥಾನ.