ಕ್ರೈಂ

ರಾಪಿಡೋ ಬೈಕ್ ಟ್ಯಾಕ್ಸಿ ಹೈಡ್ರಾಮಾ: ಚಾರ್ಜಿಂಗ್ ನೆಪದಲ್ಲಿ 1 ಲಕ್ಷ ರೂ. ಸ್ಯಾಮ್‌ಸಂಗ್ ಫೋನ್‌ನೊಂದಿಗೆ ಚಾಲಕ ಪರಾರಿ.

Hemanth Rajashekar

ವರದಿಗಾರರು (Reporter)

Hemanth Rajashekar

11:10 AM IST

ರಾಪಿಡೋ ಬೈಕ್ ಟ್ಯಾಕ್ಸಿ ಹೈಡ್ರಾಮಾ: ಚಾರ್ಜಿಂಗ್ ನೆಪದಲ್ಲಿ 1 ಲಕ್ಷ ರೂ. ಸ್ಯಾಮ್‌ಸಂಗ್ ಫೋನ್‌ನೊಂದಿಗೆ ಚಾಲಕ ಪರಾರಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಂಬಿ ಬೈಕ್ ಟ್ಯಾಕ್ಸಿ ಏರಿದ ಪ್ರಯಾಣಿಕನೊಬ್ಬನಿಗೆ ಕಹಿ ಅನುಭವ ಎದುರಾಗಿದೆ. ಬೆಳಗಿನ ಜಾವ ಪ್ರಯಾಣಿಕನೋರ್ವನಿಗೆ ಚಾರ್ಜಿಂಗ್ ನೆಪ ಹೇಳಿ, ಆತನ 1 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ (Samsung Galaxy S24 Ultra) ಸ್ಮಾರ್ಟ್‌ಫೋನ್‌ನೊಂದಿಗೆ ಸವಾರ ಪರಾರಿಯಾಗಿರುವ ಆಘಾತಕಾರಿ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಾರ್ಜಿಂಗ್ ನೆಪದಲ್ಲಿ ನಡೆದ ನಂಬಿಕೆ ದ್ರೋಹ:

ಬೆಳಗಿನ ಜಾವ ಸುಮಾರು 5.50 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಂತ್ರಸ್ತ ಪ್ರಯಾಣಿಕ ತ್ರಿದೀಪ್ ದೇಬ್‌ನಾಥ್ (Trideep Debnath) ಎಂಬುವವರು ನಾರಾಯಣಪ್ಪ ಗಾರ್ಡನ್‌ನಿಂದ ಮಾರತಹಳ್ಳಿ ತೆರಳಲು ರಾಪಿಡೋ (Rapido) ಆ್ಯಪ್ ಮೂಲಕ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಬುಕಿಂಗ್ ಸ್ವೀಕರಿಸಿದ ಆಶುತೋಷ್ ಕುಮಾರ್ ಎಂಬ ಬೈಕ್ ಸವಾರ ಪ್ರಯಾಣಿಕನನ್ನು ಕರೆದುಕೊಂಡು ಹೋಗಲು ಸ್ಥಳಕ್ಕೆ ಬಂದಿದ್ದನು.

ಪ್ರಯಾಣ ಆರಂಭವಾದ ಸ್ವಲ್ಪ ಸಮಯದ ನಂತರ, ಪ್ರಯಾಣಿಕ ತ್ರಿದೀಪ್ ದೇಬ್‌ನಾಥ್ ತಮ್ಮ ಮೊಬೈಲ್‌ನಲ್ಲಿ ಚಾರ್ಜ್ ಖಾಲಿಯಾಗಿದೆ ಎಂಬ ವಿಷಯವನ್ನು ಸವಾರ ಆಶುತೋಷ್ ಕುಮಾರ್‌ಗೆ ತಿಳಿಸಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡ ಸವಾರ, ಬೈಕ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಲು ವ್ಯವಸ್ಥೆಯಿದೆ ಎಂದು ನಂಬಿಸಿ ಫೋನ್ ನೀಡುವಂತೆ ಕೇಳಿದ್ದಾನೆ. ಅದನ್ನು ನಿಜವೆಂದು ನಂಬಿದ ತ್ರಿದೀಪ್, ಸುಮಾರು 1 ಲಕ್ಷ ರೂಪಾಯಿ ಬೆಲೆಬಾಳುವ ತಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ ಫೋನ್ ಅನ್ನು ಸವಾರನಿಗೆ ನೀಡಿದ್ದಾರೆ.

ಗಾಡಿ ಪಂಕ್ಚರ್ ನೆಪ: ಸವಾರನ ವಂಚನೆ:

ಮಡಿವಾಳ ಸಮೀಪದ ಪೆಟ್ರೋಲ್ ಬಂಕ್ ತಲುಪಿದಾಗ ಬೈಕ್ ಸವಾರ ತನ್ನ ಅಸಲಿ ಆಟ ಶುರುಮಾಡಿದ. ಬೈಕ್‌ನ ಹಿಂಭಾಗದ ಟೈರ್‌ನಲ್ಲಿ ಗಾಳಿ ಕಡಿಮೆಯಾಗಿದೆ, ಅದನ್ನು ಪರೀಕ್ಷಿಸಬೇಕು ಎಂದು ಪ್ರಯಾಣಿಕನಿಗೆ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಸವಾರನ ಮಾತು ನಂಬಿ ತ್ರಿದೀಪ್ ಕೆಳಗಿಳಿಯುತ್ತಿದ್ದಂತೆ, ಆಶುತೋಷ್ ಕುಮಾರ್ ಕವರ್‌ನಲ್ಲಿದ್ದ ದುಬಾರಿ ಮೊಬೈಲ್‌ನೊಂದಿಗೆ ಸ್ಥಳದಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ, ಹಣಕ್ಕಾಗಿ ಬೆದರಿಕೆ ಹಾಕಿದ ಚಾಲಕ!

ಈ ಹಠಾತ್ ಘಟನೆಯಿಂದ ಆಘಾತಕ್ಕೊಳಗಾದ ತ್ರಿದೀಪ್, ತಕ್ಷಣವೇ ಸಾರ್ವಜನಿಕರ ಸಹಾಯ ಪಡೆದು ರಾಪಿಡೋ ಆ್ಯಪ್‌ನಲ್ಲಿ ಲಭ್ಯವಿದ್ದ ಸವಾರನ ವಿವರಗಳನ್ನು ಪಡೆದುಕೊಂಡಿದ್ದಾರೆ. ಬೇರೊಬ್ಬರ ಮೊಬೈಲ್ ಫೋನ್ ಬಳಸಿ ಸವಾರ ಆಶುತೋಷ್ ಕುಮಾರ್‌ಗೆ ಕರೆ ಮಾಡಿ ಮೊಬೈಲ್ ಹಿಂತಿರುಗಿಸುವಂತೆ ವಿನಂತಿಸಿದ್ದಾರೆ.

ಆದರೆ, ಕದ್ದ ಮೊಬೈಲ್ ಹಿಂತಿರುಗಿಸಲು ನಿರಾಕರಿಸಿದ ಸವಾರ, ಫೋನ್ ಬೇಕಿದ್ದರೆ 18,000 ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡದೆ ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಹಿರಂಗವಾಗಿಯೇ ಬೆದರಿಕೆ ಒಡ್ಡಿದ್ದಾನೆ. ಇಡೀ ಪರಾರಿಯಾದ ದೃಶ್ಯ ಹಾಗೂ ಸವಾರನ ಕೃತ್ಯ ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲು:

ಸವಾರನ ಬೆದರಿಕೆಗೆ ಜಗ್ಗದ ತ್ರಿದೀಪ್ ದೇಬ್‌ನಾಥ್ ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ರಾಪಿಡೋ ಆ್ಯಪ್‌ನಲ್ಲಿದ್ದ ರೈಡರ್ ಮಾಹಿತಿಯ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಆಶುತೋಷ್ ಕುಮಾರ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬಳಸುವ ಪ್ರಯಾಣಿಕರು ತಮ್ಮ ಬೆಲೆಬಾಳುವ ವಸ್ತುಗಳು ಹಾಗೂ ಮೊಬೈಲ್ ಫೋನ್‌ಗಳ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಈ ಘಟನೆ ಎಚ್ಚರಿಸುತ್ತದೆ.

ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:

ಸಚಿವ ಕೃಷ್ಣ ಬೈರೇಗೌಡ ಅವರ ಸ್ವಕ್ಷೇತ್ರದ ರಸ್ತೆಗಳ ಶೋಚನೀಯ ಸ್ಥಿತಿ, ಕೋಗಿಲು-ಸಂಪಿಗೆಹಳ್ಳಿ ರಸ್ತೆ ವಿಸ್ತರಣೆಗೆ ಬಿಬಿಎಂಪಿ ನೋಟಿಫಿಕೇಶನ್.

ಯುಕೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಸಿಎಂ ವಿಜಯ್-ಅಜಿತ್ ಕುಮಾರ್ ಭೇಟಿ. ಲಂಡನ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಕಾಂಬಿನೇಷನ್.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರೀ ಡ್ರಗ್ಸ್ ಬೇಟೆ: ಬ್ಯಾಂಕಾಕ್ ಪ್ರಯಾಣಿಕನಿಂದ ₹5.25 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ.

ಈಕ್ಷಣ Logo

ಕರ್ನಾಟಕ ಮತ್ತು ನಮ್ಮ ಬೆಂಗಳೂರಿನ ತಾಜಾ ಸುದ್ದಿಗಳು, ತಂತ್ರಜ್ಞಾನ ಮತ್ತು ಜೀವನಶೈಲಿಯ ಅಪ್‌ಡೇಟ್‌ಗಳಿಗಾಗಿ ನಿಮ್ಮ ನಂಬಿಕಸ್ತ ತಾಣ. ಜಾಣ್ಮೆಯಿಂದ ಓದಿ.

ನಮ್ಮನ್ನು ಅನುಸರಿಸಿ