ಖಾಕಿ ಪವರ್ ತೋರಿಸಿದ್ನಾ ಪೊಲೀಸ್ ಗಂಡ? ‘ನಿಮ್ಮಪ್ಪ ಸೈಟ್, ಮನೆ ಕೊಟ್ಟಿಲ್ಲ’ ಎಂದು ಪತ್ನಿ, ಮಾವನ ಮೇಲೆಯೇ ಮಚ್ಚು ಬೀಸಿದ ಬೆಂಗಳೂರು ಪಿಎಸ್‌ಐ ಭೈರಪ್ಪ ಅರೆಸ್ಟ್!
ವರದಿಗಾರರು (Reporter)
Hemanth Rajashekar01:55 AM IST

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಕ್ಷಕನೇ ಭಕ್ಷಕನಾದರೆ ಜನಸಾಮಾನ್ಯರು ಯಾರನ್ನು ನಂಬಬೇಕು? ಇಂತಹದ್ದೊಂದು ಬೆಚ್ಚಿಬೀಳಿಸುವ ಹಾಗೂ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. “ನಿಮ್ಮಪ್ಪ ನನಗೇನೂ ಕೊಟ್ಟಿಲ್ಲ, ಸೈಟೂ ಇಲ್ಲ, ದುಡ್ಡೂ ಇಲ್ಲ” ಎಂದು ಕಿರುಕುಳ ನೀಡುತ್ತಾ, ಪತ್ನಿ ಹಾಗೂ ಮಾವನ ಮೇಲೆಯೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಭೈರಪ್ಪ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಭೈರಪ್ಪ ಅವರ ಕರಾಳ ಮುಖವನ್ನು ಸ್ವತಃ ಅವರ ಧರ್ಮಪತ್ನಿಯೇ ಸಾರ್ವಜನಿಕವಾಗಿ ಬಯಲು ಮಾಡಿದ್ದಾರೆ. ನೊಂದ ಪತ್ನಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣಾ ಪೊಲೀಸರು ಆರೋಪಿ ಪಿಎಸ್‌ಐ ಭೈರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾದ ಮೂರು ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಬಿರುಗಾಳಿ!
ಬಂಧಿತ ಪಿಎಸ್‌ಐ ಭೈರಪ್ಪ ಹಾಗೂ ಸಂತ್ರಸ್ತೆಗೆ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು. ಈ ದಂಪತಿಗೆ ಮೂರು ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಮದುವೆಯಾದ ಮೊದಲ ಮೂರು ವರ್ಷಗಳ ಕಾಲ ಇವರ ಸಂಸಾರ ಹಸನಾಗಿಯೇ ಇತ್ತು. ಆದರೆ, ಅಧಿಕಾರ ತಲೆಗೇರಿದ ಬೆನ್ನಲ್ಲೇ ಭೈರಪ್ಪನ ಬುದ್ಧಿ ಕೆಟ್ಟಿತ್ತು ಎನ್ನಲಾಗಿದೆ. ಕಂಡ ಕಂಡ ಯುವತಿಯರೊಂದಿಗೆ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮಾಡುವುದನ್ನು ಈತ ಹವ್ಯಾಸವಾಗಿಸಿಕೊಂಡಿದ್ದ. ಇತ್ತೀಚೆಗೆ ಪತ್ನಿ ಶಿರಡಿ ಪ್ರವಾಸಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾಗ, ಅದನ್ನು ತಡೆದು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದು ದರ್ಪ ಮೆರೆದಿದ್ದ ಎನ್ನಲಾಗಿದೆ.
‘ನಿಮ್ಮಪ್ಪ ಸೈಟ್ ಕೊಟ್ಟಿಲ್ಲ, ಮನೆ ಕಟ್ಟಿಸಿಕೊಟ್ಟಿಲ್ಲ’ ಎಂದು ದಿನಾ ರಂಪಾಟ!
ಮದುವೆಯಾದಾಗಿನಿಂದಲೂ ಭೈರಪ್ಪನಿಗೆ ವರದಕ್ಷಿಣೆ ಆಸೆ ಮಾತ್ರ ಕಡಿಮೆಯಾಗಿರಲಿಲ್ಲ. “ನಿಮ್ಮ ಮನೆಯವರು ನನಗೇನೂ ಕೊಟ್ಟಿಲ್ಲ. ಒಂದು ಸೈಟ್ ಕೊಟ್ಟಿಲ್ಲ, ಮನೆ ಕಟ್ಟಿಸಿಕೊಟ್ಟಿಲ್ಲ, ಹಣವನ್ನೂ ಕೊಟ್ಟಿಲ್ಲ” ಎಂದು ದಿನನಿತ್ಯ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಗಲಾಟೆಯಾದಾಗಲೆಲ್ಲಾ ಹೆಂಡತಿ ಮತ್ತು ಮಗುವನ್ನು ತಡರಾತ್ರಿಯೆನ್ನದೆ ಮನೆಯಿಂದ ಹೊರದಬ್ಬುತ್ತಿದ್ದ ಈ ಅಧಿಕಾರಿ, ತನ್ನ ಶೋಕಿ ಜೀವನಕ್ಕಾಗಿ ಬಟ್ಟೆ ಚೀಲ ಹಿಡಿದು ತಾನೇ ಮನೆಯಿಂದ ಹೊರನಡೆದು ಮಜಾ ಮಾಡುತ್ತಿದ್ದ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಮಾವ ಬುದ್ಧಿ ಹೇಳಲು ಬಂದಾಗ ಕೈಗೆ ಮಚ್ಚು ಹಿರಿದ ಪಿಎಸ್‌ಐ!
ಜುಲೈ 12 ರಂದು ಮನೆಯಲ್ಲಿ ಇವರ ಸಂಸಾರ ಕಲಹ ವಿಕೋಪಕ್ಕೆ ಹೋಗಿತ್ತು. ದಂಪತಿಗಳ ನಡುವಿನ ಜಗಳ ಬಿಡಿಸಲು ಹಾಗೂ ಅಳಿಯನಿಗೆ ಬುದ್ಧಿವಾದ ಹೇಳಲು ಸಂತ್ರಸ್ತೆಯ ತಂದೆ (ಮಾವ) ಮನೆಗೆ ಬಂದಿದ್ದರು. ಆದರೆ, ಮದಾಂದನಾಗಿದ್ದ ಪಿಎಸ್‌ಐ ಭೈರಪ್ಪ, ಮಾವನ ಮೇಲೆಯೇ ಮಚ್ಚು ಹಿಡಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಪತ್ನಿಯನ್ನು ಹೆದರಿಸಲು ರೌಡಿಶೀಟರ್‌ಗಳನ್ನು ಮನೆ ಮುಂದೆ ತಂದು ನಿಲ್ಲಿಸುತ್ತಿದ್ದ ಎಂದು ಸಂತ್ರಸ್ತೆ ವಿಡಿಯೋ ಸಮೇತ ಆರೋಪಿಸಿದ್ದಾರೆ. ವಿಡಿಯೋದಲ್ಲಿ ಭೈರಪ್ಪ ಕೈಯಲ್ಲಿ ಮಚ್ಚು ಹಿಡಿದಿರುವುದು ಸ್ಪಷ್ಟವಾಗಿ ಸೆರೆಯಾಗಿದೆ.
ಇನ್‌ಸ್ಟಾಗ್ರಾಮ್ ಯುವತಿಯರಿಗೆ ಜಾಲ, ವಿರೋಧಿಸಿದರೆ ಹೆಂಡತಿಗೆ ಧರ್ಮದೇಟು!
ಪಿಎಸ್‌ಐ ಭೈರಪ್ಪನ ಕಾಟ ಕೇವಲ ವರದಕ್ಷಿಣೆಗೆ ಸೀಮಿತವಾಗಿರಲಿಲ್ಲ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗುವ ಅಪರಿಚಿತ ಯುವತಿಯರಿಗೆ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ನಂಬಿಸಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಹೆಂಡತಿ, ಮಗು ಮನೆಯಲ್ಲಿದ್ದರೂ ಬೇರೆ ಯುವತಿಯರನ್ನು ಮನೆಗೆ ಕರೆತರುತ್ತಿದ್ದ. ಇದನ್ನು ಪತ್ನಿ ಪ್ರಶ್ನಿಸಿದರೆ ಕುಡಿದು ಬಂದು ಮನಬಂದಂತೆ ಥಳಿಸುತ್ತಿದ್ದ. ಮದುವೆ ಪ್ರಸ್ತಾಪಕ್ಕೆ ಒಪ್ಪದ ಯುವತಿಯರಿಗೂ ತನ್ನ ಪೊಲೀಸ್ ಪವರ್ ಬಳಸಿ ಬೆದರಿಕೆ ಹಾಕುತ್ತಿದ್ದ ಎಂದು ನೊಂದ ಪತ್ನಿ ಕಣ್ಣೀರು ಹಾಕಿದ್ದಾರೆ.
ಪೊಲೀಸ್ ಇಲಾಖೆಗೆ ಮುಜುಗರ ತಂದ ಪ್ರಕರಣ: ಕಮಿಷನರ್ ಮೊರೆ ಹೋದ ಪತ್ನಿ
ಆರಂಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಆರೋಪಿ ಸಹೋದ್ಯೋಗಿ ಎಂಬ ಕಾರಣಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು. ಕೇವಲ ಎನ್‌ಸಿಆರ್ (Non-Cognizable Report) ದಾಖಲಿಸಿ ಕಳುಹಿಸಿದ್ದರು. ಇದರಿಂದ ಬೇಸತ್ತ ಸಂತ್ರಸ್ತೆ, ತನಗೆ ನ್ಯಾಯ ಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಖುದ್ದಾಗಿ ಭೇಟಿ ನೀಡಿ ಲಿಖಿತ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದರು.
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಕೆಂಗೇರಿ ಪೊಲೀಸರು, ಸದ್ಯ ಆರೋಪಿ ಪಿಎಸ್‌ಐ ಭೈರಪ್ಪನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನು ರಕ್ಷಕನೇ ಈ ರೀತಿ ಹಾದಿ ತಪ್ಪಿ ನಡೆದುಕೊಂಡಿರುವುದು ಇಡೀ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: