ಮಂಗಳಮುಖಿಯರ ಕಿರುಕುಳ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ: ಬೆಂಗಳೂರು ನಗರ ಪೊಲೀಸರ ಹೊಸ ಗೈಡ್‌ಲೈನ್ಸ್.
ವರದಿಗಾರರು (Reporter)
Hemanth Rajashekar04:50 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳು, ಟ್ರಾಫಿಕ್ ಸಿಗ್ನಲ್‌ಗಳು ಹಾಗೂ ಶುಭ ಸಮಾರಂಭಗಳಲ್ಲಿ ತೃತೀಯಲಿಂಗಿಗಳಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಕಿರುಕುಳ, ಬಲವಂತದ ಹಣ ವಸೂಲಿ ಮತ್ತು ಸಂಚಾರ ದಟ್ಟಣೆ ಸಮಸ್ಯೆಯನ್ನು ತಡೆಯಲು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯು ಅತ್ಯಂತ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸಾರ್ವಜನಿಕರಿಂದ ವ್ಯಾಪಕ ದೂರುಗಳು ಹಾಗೂ ಮಾಧ್ಯಮ ವರದಿಗಳು ಬಂದ ಹಿನ್ನೆಲೆಯಲ್ಲಿ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಲಾಗಿದೆ.
ಪೊಲೀಸರಿಗೆ ನೀಡಲಾದ ಪ್ರಮುಖ ಸೂಚನೆಗಳು ಮತ್ತು ಮಾರ್ಗಸೂಚಿಗಳು:
- ತಕ್ಷಣದ ಕಾನೂನು ಕ್ರಮ: ಸಾರ್ವಜನಿಕರಿಂದ ಹಣ ಅಥವಾ ಭಿಕ್ಷೆಗಾಗಿ ದೌರ್ಜನ್ಯ, ಬೆದರಿಕೆ, ನಿಂದನೆ, ಹಲ್ಲೆ ಅಥವಾ ಸಾರ್ವಜನಿಕರಿಗೆ ಕಿರುಕುಳ ನೀಡುವ ದೂರುಗಳು ಬಂದರೆ, ಸ್ಥಳೀಯ ಪೊಲೀಸರು ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
- ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ನಿಗಾ: ಟ್ರಾಫಿಕ್ ಸಿಗ್ನಲ್‌ಗಳು, ತರಕಾರಿ ಮಾರುಕಟ್ಟೆಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ವಸತಿ ಪ್ರದೇಶಗಳು ಹಾಗೂ ಸಭೆ-ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು.
- ದೂರು ಹೆಚ್ಚಿರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚಳ: ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ದೂರುಗಳು ಪದೇ ಪದೇ ವರದಿಯಾಗುವ ಸ್ಥಳಗಳನ್ನು ಪತ್ತೆಹಚ್ಚಿ, ಆ ಭಾಗಗಳಲ್ಲಿ ಪೊಲೀಸ್ ಗಸ್ತು ಪಡೆಯ (Patrolling) ಪ್ರಮಾಣವನ್ನು ಹೆಚ್ಚಿಸಲು ಸೂಚಿಸಲಾಗಿದೆ.

- ಸಮುದಾಯದೊಂದಿಗೆ ಸಭೆ ಮತ್ತು ಜಾಗೃತಿ: ತೃತೀಯಲಿಂಗಿ ಸಮುದಾಯದ ಮುಖಂಡರು ಮತ್ತು ಸದಸ್ಯರೊಂದಿಗೆ ನಿರಂತರ ಸಭೆಗಳನ್ನು ನಡೆಸಿ, ಅಕ್ರಮ ಅಥವಾ ಕಿರುಕುಳಕಾರಿ ಚಟುವಟಿಕೆಗಳಲ್ಲಿ ತೊಡಗದಂತೆ ಜಾಗೃತಿ ಮೂಡಿಸಲಾಗುತ್ತದೆ.
- ಗೌರವ ಮತ್ತು ಹಕ್ಕುಗಳ ರಕ್ಷಣೆ: ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಜೊತೆಗೆ, ತೃತೀಯಲಿಂಗಿಗಳ ಕಾನೂನಾತ್ಮಕ ಹಕ್ಕುಗಳು ಮತ್ತು ಮಾನವ ಘನತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ಕಾರ್ಯಾಚರಣೆ ವೇಳೆ ಪೊಲೀಸರು ಯಾವುದೇ ರೀತಿಯ ನಿಂದನೀಯ ಅಥವಾ ಅವಮಾನಕರ ಭಾಷೆಯನ್ನು ಬಳಸಬಾರದು ಎಂದು ನಿರ್ದೇಶಿಸಲಾಗಿದೆ.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮನವಿ
ಸಾರ್ವಜನಿಕರು ಇಂತಹ ಘಟನೆಗಳು ಸಂಭವಿಸಿದಾಗ ಆತಂಕಪಡುವ ಅಗತ್ಯವಿಲ್ಲ. ತೃತೀಯಲಿಂಗಿಗಳಿಂದ ಯಾವುದೇ ರೀತಿಯ ಬೆದರಿಕೆ, ಕಿರುಕುಳ ಅಥವಾ ಬಲವಂತದ ಹಣ ವಸೂಲಿ ಎದುರಾದರೆ ತಕ್ಷಣವೇ ನಂಬರ್ 112 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆ ವಿನಂತಿಸಿದೆ.
ಈ ಹೊಸ ಮಾರ್ಗಸೂಚಿಯು ಸಾರ್ವಜನಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ತೃತೀಯಲಿಂಗಿಗಳ ಮಾನವ ಹಕ್ಕುಗಳನ್ನು ಗೌರವಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ.
ನ್ಯೂಯಾರ್ಕ್‌ನಲ್ಲಿಎರಡನೇ ಫಿಪಿಕ್ವಿ ದೇಶಾಂಗ ಸಚಿವರ ಸಭೆ ನೇತೃತ್ವ ವಹಿಸಿದ ಇಎಎಂ ಎಸ್. ಜೈಶಂಕರ್
ಪಿಎಂ ಮೋದಿಯಿಂದ ವಡ್ನಗರ-ವಾರಾಣಸಿ ಸೇವಾ ಯಾತ್ರಿಗಳೊಂದಿಗೆ ಸಂವಾದ; ಸೇವೆಯೇ ಪ್ರಥಮ ಕರ್ತವ್ಯವಾಗಬೇಕು ಎಂದ ಪ್ರಧಾನಿ.