ಬೆಂಗಳೂರಿನಲ್ಲಿ ಅನಾಥ ವಾಹನಗಳ ಬೇಟೆ ಆರಂಭ: 7 ದಿನಗಳಲ್ಲಿ ಕ್ಲೈಮ್ ಮಾಡದಿದ್ದರೆ ಗಾಡಿ ನಿಮ್ಮ ಕೈ ತಪ್ಪೋದು ಫಿಕ್ಸ್.
ವರದಿಗಾರರು (Reporter)
Hemanth Rajashekar02:06 AM IST

ಬೆಂಗಳೂರು: ರಾಜಧಾನಿಯ ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವ ಮಾಲೀಕರಿಲ್ಲದ ಹಾಗೂ ಅನಾಥ ವಾಹನಗಳಿಗೆ ಕೊನೆಗೂ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಜ್ಜಾಗಿದೆ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಧೂಳು ಹಿಡಿಯುತ್ತಿದ್ದ ವಾಹನಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಜುಲೈ 10 ರಿಂದ ಅತ್ಯಂತ ಕಟ್ಟುನಿಟ್ಟಾಗಿ ಆರಂಭಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಟನ್‌ಪೇಟೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿರುವ ಅನಾಥ ವಾಹನಗಳಿಗೆ ಈಗಾಗಲೇ ಜಂಟಿ ಕಾರ್ಯಾಚರಣೆ ತಂಡವು ಅಧಿಕೃತ ನೋಟಿಸ್‌ಗಳನ್ನು ಅಂಟಿಸಲು ಶುರು ಮಾಡಿದೆ.
ಜಿಬಿಎ ಕಾಯ್ದೆ 2024 ರ ಅಡಿ ಭರ್ಜರಿ ಕಾರ್ಯಾಚರಣೆ
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದ ಮೇರೆಗೆ, ಗ್ರೇಟರ್ ಬೆಂಗಳೂರು ಅಥಾರಿಟಿಯ (GBA) ಐದು ನಗರ ಪಾಲಿಕೆಗಳು ಹಾಗೂ ಬೆಂಗಳೂರು ನಗರ ಸಂಚಾರಿ ಪೊಲೀಸರು ಜಂಟಿಯಾಗಿ ಈ ಬೃಹತ್ ಜಪ್ತಿ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024’ ರ ಸೆಕ್ಷನ್ 324 (Section 324 of the GBA Act, 2024) ಅಡಿಯಲ್ಲಿ ಈ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಮತ್ತು ನಗರದ ಸೌಂದರ್ಯವನ್ನು ಹಾಳುಗೆಡವುವ ವಾಹನಗಳನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

7 ದಿನಗಳ ಗಡುವು: ತಪ್ಪಿದರೆ ಹರಾಜು ಖಂಡಿತ!
ಅಧಿಕಾರಿಗಳು ರಸ್ತೆ ಬದಿಯ ಅನಾಥ ವಾಹನಗಳನ್ನು ಪತ್ತೆಹಚ್ಚಿ, ಅವುಗಳ ಮೇಲೆ ಎಚ್ಚರಿಕೆಯ ಅಧಿಕೃತ ಸ್ಟಿಕ್ಕರ್ ನೋಟಿಸ್ ಅಂಟಿಸುತ್ತಿದ್ದಾರೆ. ಅದರೊಂದಿಗೆ ಆ ವಾಹನಗಳು ಅಲ್ಲಿಂದ ಕದಗದಂತೆ ವೀಲ್ ಕ್ಲ್ಯಾಂಪ್ (ಚಕ್ರಗಳಿಗೆ ಬೀಗ) ಹಾಕಲಾಗುತ್ತಿದೆ.
ನೋಟಿಸ್ ನೀಡಿದ ದಿನದಿಂದ ಮಾಲೀಕರಿಗೆ ಕೇವಲ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ನಿಗದಿತ ಅವಧಿಯೊಳಗೆ ಮಾಲೀಕರು ಸಂಬಂಧಪಟ್ಟ ಪಾಲಿಕೆ ಅಥವಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ದಂಡ ಪಾವತಿಸಿ ತಮ್ಮ ವಾಹನಗಳನ್ನು ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳಬೇಕು. ಒಂದು ವೇಳೆ ಏಳು ದಿನಗಳ ಒಳಗಾಗಿ ವಾಹನವನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಅಧಿಕಾರಿಗಳು ಟೋಯಿಂಗ್ ಮೂಲಕ ವಶಪಡಿಸಿಕೊಳ್ಳಲಿದ್ದಾರೆ. ಬಳಿಕ ಕಾನೂನುಬದ್ಧವಾಗಿ ಸಾರ್ವಜನಿಕ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಒಮ್ಮೆ ಹರಾಜು ಪ್ರಕ್ರಿಯೆ ಮುಗಿದ ನಂತರ ವಾಹನದ ಮೇಲೆ ಯಾವುದೇ ಹಕ್ಕು ಸಾಧಿಸಲು ಮಾಲೀಕರಿಗೆ ಅವಕಾಶವಿರುವುದಿಲ್ಲ ಎಂದು ಜಿಬಿಎ ಮುಖ್ಯ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ದಂಡದ ವಿವರಗಳು
- ನಿಗದಿತ ಅವಧಿಯೊಳಗೆ ವಾಹನವನ್ನು ಕ್ಲೈಮ್ ಮಾಡಿದರೆ ನೋ-ಪಾರ್ಕಿಂಗ್ ನಿಯಮಗಳ ಅಡಿಯಲ್ಲಿ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ.
- ಒಂದು ವೇಳೆ ವಾಹನವನ್ನು ಅಧಿಕಾರಿಗಳೇ ಟೋಯಿಂಗ್ ಮಾಡಿ ಜಪ್ತಿ ಮಾಡಿದರೆ, ದಂಡದ ಜೊತೆಗೆ ಟೋಯಿಂಗ್ ವೆಚ್ಚ ಹಾಗೂ ಹೆಚ್ಚುವರಿ ಪೆನಾಲ್ಟಿಯನ್ನು ಮಾಲೀಕರೇ ಭರಿಸಬೇಕಾಗುತ್ತದೆ.
- ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಇಡೀ ನಗರದಲ್ಲಿ 1,500 ಕ್ಕೂ ಹೆಚ್ಚು ಅನಾಥ ವಾಹನಗಳನ್ನು ಜಿಪಿಎಸ್ ಕೋಆರ್ಡಿನೇಟ್ಸ್ ಹಾಗೂ ಫೋಟೋಗಳ ಸಮೇತ ಗುರುತಿಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರು ಸಹ ತಮ್ಮ ಬಡಾವಣೆಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ಅನಾಥ ವಾಹನಗಳ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರ ಅಧಿಕೃತ ಆ್ಯಪ್ ಮೂಲಕ ಮಾಹಿತಿ ನೀಡಿ ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬಹುದಾಗಿದೆ. ನಿಮ್ಮ ವಾಹನಗಳೂ ಸಹ ಇಂತಹ ಸಾರ್ವಜನಿಕ ಸ್ಥಳಗಳಲ್ಲಿದ್ದರೆ ತಕ್ಷಣವೇ ಅವುಗಳನ್ನು ಸುರಕ್ಷಿತ ಖಾಸಗಿ ಜಾಗಗಳಿಗೆ ಸ್ಥಳಾಂತರಿಸಿಕೊಳ್ಳಲು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: