ಬೆಂಗಳೂರು ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಬ್ರೇಕ್: ಟ್ರಾಫಿಕ್ ಪೊಲೀಸರಿಂದ ಬಿಗ್ ಅಪ್ಡೇಟ್.
ವರದಿಗಾರರು (Reporter)
Hemanth Rajashekar07:30 AM IST

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭೀಕರ ರಸ್ತೆ ಅಪಘಾತ ತಡೆಯಲು ಹಾಗೂ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಬೆಂಗಳೂರು ಸಂಚಾರ ಪೊಲೀಸರು ಅತ್ಯಂತ ಕಠಿಣ ಹಾಗೂ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ನಗರದ ಅತ್ಯಂತ ಜನನಿಬಿಡ 5 ಪ್ರಮುಖ ಮೇಲ್ಸೇತುವೆಗಳಲ್ಲಿ (Elevated Corridors) ದ್ವಿಚಕ್ರ ವಾಹನಗಳು ಸೇರಿದಂತೆ ಕೆಲವು ನಿರ್ದಿಷ್ಟ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಮತ್ತು ಸಂಚಾರ ಸಮಯದ ಮೇಲೆ ಕಟ್ಟುನಿಟ್ಟಿನ ಆಂಕ್ಷೆಗಳನ್ನು ವಿಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಫ್ಲೈಓವರ್‌ಗಳಲ್ಲಿ ವಾಹನಗಳ ವೇಗದ ವ್ಯತ್ಯಾಸ, ಸೇತುವೆಯ ಕಿರಿದಾದ ವಿನ್ಯಾಸ, ತುರ್ತು ಸೇವೆಗಳ ಸಂಚಾರಕ್ಕೆ ಅಡಚಣೆ ಮತ್ತು ಎಂಟ್ರಿ-ಎಕ್ಸಿಟ್ ಪಾಯಿಂಟ್‌ಗಳಲ್ಲಿ ಪದೇ ಪದೇ ವಾಹನಗಳು ಕೆಟ್ಟು ನಿಂತು ಸೃಷ್ಟಿಯಾಗುವ ಟ್ರಾಫಿಕ್ ಜಾಮ್ ಕುರಿತು ಆಳವಾದ ವೈಜ್ಞಾನಿಕ ಅಧ್ಯಯನ ನಡೆಸಿದ ನಂತರ ಈ ನಿರ್ಧಾರ ತಳೆಯಲಾಗಿದೆ.
ಯಾವೆಲ್ಲಾ ಫ್ಲೈಓವರ್‌ಗಳಲ್ಲಿ ಏನೇನು ನಿಯಮ? ಪೂರ್ಣ ವಿವರ ಇಲ್ಲಿದೆ
1. ಬಿಜಿಎಸ್ (ಸಿರ್ಸಿ ಸರ್ಕಲ್) ಫ್ಲೈಓವರ್ – ಮೈಸೂರು ರಸ್ತೆ
- ಸಂಪೂರ್ಣ ನಿಷೇಧ: ಭಾರಿ ಸರಕು ಸಾಗಣೆ ವಾಹನಗಳಿಗೆ (Heavy Goods Vehicles) 24 ಗಂಟೆಯೂ ಪ್ರವೇಶ ಬಂದ್.
- ಪೀಕ್ ಅವರ್ಸ್ ಆಂಕ್ಷೆ: ಮೂರು ಚಕ್ರದ ಗೂಡ್ಸ್ ಆಟೋಗಳು ಸೇರಿದಂತೆ ಇತರ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7:00 ರಿಂದ 11:00 ರವರೆಗೆ ಹಾಗೂ ಸಂಜೆ 4:00 ರಿಂದ ರಾತ್ರಿ 10:00 ರವರೆಗೆ ಸಂಚಾರ ನಿಷೇಧಿಸಲಾಗಿದೆ.
2. ಪೀಣ್ಯ ಎಲಿವೇಟೆಡ್ ಕಾರಿಡಾರ್
- ಸಂಪೂರ್ಣ ನಿಷೇಧ: ಪ್ರಯಾಣಿಕರ ಪ್ಯಾಸೆಂಜರ್ ಆಟೋರಿಕ್ಷಾಗಳು ಮತ್ತು ಮೂರು ಚಕ್ರದ ಗೂಡ್ಸ್ ಆಟೋಗಳಿಗೆ ದಿನದ 24 ಗಂಟೆಯೂ ಸಂಪೂರ್ಣ ನಿಷೇಧ.
- ಪೀಕ್ ಅವರ್ಸ್ ಆಂಕ್ಷೆ: ಭಾರಿ ಮತ್ತು ಮಧ್ಯಮ ಮಾದರಿಯ ಗೂಡ್ಸ್ ವಾಹನಗಳಿಗೆ ಬೆಳಗ್ಗೆ 7:00 ರಿಂದ 11:00 ಮತ್ತು ಸಂಜೆ 4:00 ರಿಂದ ರಾತ್ರಿ 10:00 ರವರೆಗೆ ನಿಷೇಧ ಇರಲಿದೆ.
3. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ
- ಸಂಪೂರ್ಣ ನಿಷೇಧ (ದ್ವಿಚಕ್ರ ವಾಹನಗಳು ಸೇರಿದಂತೆ): ದ್ವಿಚಕ್ರ ವಾಹನಗಳು (ಬೈಕ್/ಸ್ಕೂಟರ್), ಪ್ರಯಾಣಿಕರ ಆಟೋರಿಕ್ಷಾಗಳು ಹಾಗೂ ಮೂರು ಚಕ್ರದ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ಪ್ರವೇಶ ಇರುವುದಿಲ್ಲ.
- ಸಮಯದ ಆಂಕ್ಷೆ: ಎಲ್ಲಾ ರೀತಿಯ ಸರಕು ಸಾಗಣೆ (ಗೂಡ್ಸ್) ವಾಹನಗಳಿಗೆ ಬೆಳಗ್ಗೆ 6:00 ರಿಂದ ರಾತ್ರಿ 10:00 ರವರೆಗೆ ಪ್ರವೇಶ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
4. ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್
- ಸಂಪೂರ್ಣ ನಿಷೇಧ: ಭಾರಿ ಸರಕು ಸಾಗಣೆ ವಾಹನಗಳಿಗೆ (Heavy Goods Vehicles) ದಿನದ 24 ಗಂಟೆಯೂ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್)
- ಸಂಪೂರ್ಣ ನಿಷೇಧ (ದ್ವಿಚಕ್ರ ವಾಹನಗಳು ಸೇರಿದಂತೆ): ದ್ವಿಚಕ್ರ ವಾಹನಗಳು (ಬೈಕ್‌ಗಳು) ಮತ್ತು ಆಟೋರಿಕ್ಷಾಗಳಿಗೆ 24 ಗಂಟೆಯೂ ಸಂಚಾರ ಬಂದ್.
- ಸಮಯದ ಆಂಕ್ಷೆ: ಎಲ್ಲಾ ವರ್ಗದ ಗೂಡ್ಸ್ ವಾಹನಗಳಿಗೆ ಬೆಳಗ್ಗೆ 6:00 ರಿಂದ ರಾತ್ರಿ 10:00 ರವರೆಗೆ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ನಿಯಮ ಜಾರಿಗೆ ಬರುವುದು ಎಂದಿನಿಂದ?
ಈ ಹೊಸ ಸಂಚಾರ ನಿಯಮಗಳನ್ನು ಬೆಂಗಳೂರು ಸಂಚಾರ ಪೊಲೀಸರು ಎರಡು ಹಂತಗಳಲ್ಲಿ ಜಾರಿಗೆ ತರುತ್ತಿದ್ದಾರೆ:
- ಮೊದಲ ಹಂತ: ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್–ರಾಗಿಗುಡ್ಡ ಡಬಲ್ ಡೆಕ್ಕರ್ ಫ್ಲೈಓವರ್ ಮತ್ತು ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸೆಪ್ಟೆಂಬರ್ 4, 2026 ರಿಂದ ನಿಯಮ ಜಾರಿಗೆ ಬರಲಿದೆ.
- ಎರಡನೇ ಹಂತ: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್‌ನಲ್ಲಿ ಸೆಪ್ಟೆಂಬರ್ 11, 2026 ರಿಂದ ಈ ಕಟ್ಟುನಿಟ್ಟಿನ ನಿಯಮಗಳು ಅನುಷ್ಠಾನಗೊಳ್ಳಲಿವೆ.
ಬೆಂಗಳೂರು ನಗರವನ್ನು ಸುರಕ್ಷಿತವಾಗಿಸಲು ಮತ್ತು ಸಂಚಾರ ಸುಗಮಗೊಳಿಸಲು ಸಾರ್ವಜನಿಕರು ಹಾಗೂ ವಾಣಿಜ್ಯ ವಾಹನ ಸವಾರರು ಈ ನಿಯಮಗಳಿಗೆ ಸಂಪೂರ್ಣ ಸಹಕಾರ ನೀಡಬೇಕಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ನ್ಯೂಯಾರ್ಕ್‌ನಲ್ಲಿ ತ್ರಿವರ್ಣ ಧ್ವಜ ಹರಿದ ಖಾಲಿಸ್ತಾನಿಗಳು!
ಬೆಂಗಳೂರು ‘ಅಲ್-ಹಿಂದ್’ ಪ್ರಕರಣದಲ್ಲಿ NIA ಬೃಹತ್ ಕಾರ್ಯಾಚರಣೆ, ಪ್ರಮುಖ ಆರೋಪಿಗೆ ಜೈಲು!