ನಡುಕ ಹುಟ್ಟಿಸುವ ವಿಕೃತಿ: ನೇಣು ಕುಣಿಕೆಯಲ್ಲಿ ತಡಕಾಡುತ್ತಿದ್ದ ದೃಶ್ಯ ವಿಡಿಯೋ ಮಾಡಿ ಹಂಚಿದ ಪತಿ!
ವರದಿಗಾರರು (Reporter)
Hemanth Rajashekar06:24 AM IST

ಬಾಗಲಕೋಟೆ: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಆಕೆ ನೇಣು ಕುಣಿಕೆಯಲ್ಲಿ ಜೀವಕ್ಕಾಗಿ ತಡಕಾಡುತ್ತಿದ್ದ ಕೊನೆಯ ಕ್ಷಣಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಹಂಚಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಭಾಗ್ಯಶ್ರೀ ಜಿಗಳೂರ (23) ಎಂದು ಗುರುತಿಸಲಾಗಿದ್ದು, ಈ ಸಂಬಂಧ ಆಕೆಯ ಪತಿ ಪ್ರವೀಣ್ ಅಶೋಕ್ ಜಿಗಳೂರ (29) ಎಂಬಾತನನ್ನು ಬೀಳಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ ಹಾಗೂ ಪೊಲೀಸರ ತನಿಖೆ
ಪೊಲೀಸರ ಮಾಹಿತಿಯಂತೆ, ಮೃತ ಭಾಗ್ಯಶ್ರೀ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರವೀಣ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
2020ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ 3 ವರ್ಷದ ಗಂಡು ಮಗನಿದ್ದಾನೆ. ವೃತ್ತಿಯಲ್ಲಿ ಚಾಲಕನಾಗಿದ್ದ ಪ್ರವೀಣ್ ಕೆಲಸದ ನಿಮಿತ್ತ ಆಗಾಗ ಹೊರ ಊರುಗಳಿಗೆ ಪ್ರಯಾಣಿಸುತ್ತಿದ್ದ. ಈ ಸಮಯದಲ್ಲಿ ಪತ್ನಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂಬ ಶಂಕೆ ಆತನಲ್ಲಿ ಮೂಡಿ, ದಂಪತಿ ನಡುವೆ ಪದೇ ಪದೇ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಇದರಿಂದಾಗಿ ಭಾಗ್ಯಶ್ರೀ ಕಳೆದ ಒಂದೂವರೆ ತಿಂಗಳಿನಿಂದ ಮಹಾಲಿಂಗಪುರದಲ್ಲಿದ್ದ ತಮ್ಮ ತಂದೆಯ ಮನೆಯಲ್ಲಿ ವಾಸವಾಗಿದ್ದರು.
ಸೋಮವಾರ ಪ್ರವೀಣ್ ಮಾವನ ಮನೆಗೆ ತೆರಳಿ, ಹೆಂಡತಿಯನ್ನು ಸಮಾಧಾನಪಡಿಸಿ ಗಲಗಲಿಯಲ್ಲಿರುವ ತನ್ನ ಮನೆಗೆ ಕರೆತಂದಿದ್ದನು. ಆದರೆ ಅದೇ ದಿನ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಜಗಳ ಪ್ರಾರಂಭವಾಗಿದೆ.
ಹಲ್ಲೆ ನಡೆಸಿ ನೇಣಿಗೆ ತಳ್ಳಿದ ಶಂಕೆ: ವಿಕೃತ ವೀಡಿಯೋ ಚಿತ್ರೀಕರಣ
ಪೊಲೀಸರು ತಿಳಿಸಿರುವಂತೆ, ಭಾಗ್ಯಶ್ರೀ ಅವರ ದೇಹದ ಮೇಲೆ ರಕ್ತಸಿಕ್ತ ಗಾಯಗಳ ಗುರುತುಗಳು ಕಂಡುಬಂದಿವೆ. ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡ್ ಹಾಗೂ ಬಿಯರ್ ಬಾಟಲಿಗಳು ಪತ್ತೆಯಾಗಿದ್ದು, ಆಕೆಗೆ ಹಲ್ಲೆ ನಡೆಸಿ ಬಳಿಕ ನೇಣಿಗೆ ತಳ್ಳಲಾಗಿದೆಯೇ ಅಥವಾ ಬಲವಂತವಾಗಿ ಮಾದಕ ದ್ರವ್ಯ/ಮದ್ಯ ಸೇವನೆ ಮಾಡಿಸಲಾಗಿದೆಯೇ ಎಂಬ ಕೋನದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ನೆರವಿನೊಂದಿಗೆ ತನಿಖೆ ನಡೆಯುತ್ತಿದೆ.
ಭಾಗ್ಯಶ್ರೀ ನೇಣು ಕುಣಿಕೆಯಲ್ಲಿ ಜೀವಕ್ಕಾಗಿ ಹೆಣಗಾಡುತ್ತಿದ್ದಾಗ, ಪ್ರವೀಣ್ ಆಕೆಯನ್ನು ರಕ್ಷಿಸುವ ಬದಲು ಸಂಪೂರ್ಣ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆ. ಅಲ್ಲದೆ, ಸಂಜೆ ಸುಮಾರು 5:30 ರ ಸುಮಾರಿಗೆ ಭಾಗ್ಯಶ್ರೀ ಅವರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಲ್ಲದೆ, ಈ ವೀಡಿಯೋಗಳನ್ನು ಆಕೆಯ ಕುಟುಂಬಸ್ಥರು ಹಾಗೂ ತನ್ನ ಆಪ್ತ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ರವಾನಿಸಿದ್ದಾನೆ.
ಎಸ್ಪಿ ಸಿದ್ಧಾರ್ಥ್ ಗೋಯಲ್ ಹೇಳಿಕೆ
ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ಧಾರ್ಥ್ ಗೋಯಲ್, “ಆರೋಪಿಯು ಪತ್ನಿಯ ಮೊಬೈಲ್‌ನಲ್ಲಿದ್ದ ಕೆಲವು ವೀಡಿಯೋಗಳನ್ನು ನೋಡಿ ಆಕೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದಾನೆ. ಆ ವೀಡಿಯೋಗಳನ್ನು ತನ್ನ ಮೊಬೈಲ್‌ಗೆ ವರ್ಗಾಯಿಸಿಕೊಂಡು ಸ್ನೇಹಿತರಿಗೆ ಕಳುಹಿಸಿದ್ದಾನೆ. ಘಟನೆಯ ನಂತರ ಆತ ರೆಕಾರ್ಡ್ ಮಾಡಿದ ವೀಡಿಯೋಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದ್ದು, ಹೆಚ್ಚಿನ ಡೇಟಾ ಎಕ್ಸ್‌ಟ್ರಾಕ್ಷನ್ ಹಾಗೂ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಆರೋಪಿ ಕೃತ್ಯದ ವೇಳೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನಲಾದ ವ್ಯಕ್ತಿಗೆ ವೀಡಿಯೋ ಕರೆ ಮಾಡಿ ಘಟನೆಯನ್ನು ತೋರಿಸಿದ್ದಾನೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, “ಕರೆ ದಾಖಲೆಗಳು (CDR) ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳ ತನಿಖೆಯ ನಂತರವಷ್ಟೇ ಈ ವಿಷಯ ಸ್ಪಷ್ಟವಾಗಲಿದೆ,” ಎಂದಿದ್ದಾರೆ.
ಬಂಧಿತ ಆರೋಪಿಯನ್ನು ಕಸ್ಟಡಿಗೆ ಪಡೆದು ಘಟನೆಯ ಸಂಪೂರ್ಣ ಸತ್ಯಾಸತ್ಯತೆಯನ್ನು ಹೊರತರಲು ಬೀಳಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: