ಏಷ್ಯನ್ ಗೇಮ್ಸ್ 2026: ಸ್ಕ್ವಾಷ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ, ಬಾಕ್ಸಿಂಗ್‌ನಲ್ಲಿ ಅಂಕುಶ್ ಪಾಂಘಾಲ್‌ಗೆ ಪದಕ ಖಚಿತ.
ವರದಿಗಾರರು (Reporter)
Shreeja Rakshith04:50 PM IST

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಭಾನುವಾರ ಮಿಶ್ರ ಫಲಿತಾಂಶಗಳು ಲಭಿಸಿವೆ. ಸ್ಕ್ವಾಷ್ ಕ್ರೀಡೆಯಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಇಬ್ಬರು ಆಟಗಾರರು ಫೈನಲ್ ತಲುಪಿ ಬೆಳ್ಳಿ ಪದಕಗಳೊಂದಿಗೆ ಸ್ಪರ್ಧೆ ಮುಗಿಸಿದರೆ, ಬಾಕ್ಸಿಂಗ್‌ನಲ್ಲಿ ಅಂಕುಶ್ ಪಾಂಘಾಲ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.
ಅಭಯ್ ಸಿಂಗ್‌ಗೆ ಬೆಳ್ಳಿ ಪದಕ
ನಾಗೋಯಾ ಕಿಂಜೊ-ಫುಟೊ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಸ್ಕ್ವಾಷ್ ಫೈನಲ್‌ನಲ್ಲಿ ಭಾರತದ ಅಭಯ್ ಸಿಂಗ್ ಮಲೇಷ್ಯಾದ ಎನ್‌ಜಿ ಈನ್ ಯೋ ವಿರುದ್ಧ 11-9, 11-5, 11-5 ಅಂತರದಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪ್ರಸ್ತುತ ಚಾಂಪಿಯನ್ ಆಗಿರುವ ಈನ್ ಯೋ, ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಗೆದ್ದಿದ್ದ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡರು. ಆರಂಭಿಕ ಗೇಮ್‌ನಲ್ಲಿ ಹಣಾಹಣಿ ಪೈಪೋಟಿ ನಡೆದರೂ, ನಂತರದ ಎರಡು ಗೇಮ್‌ಗಳಲ್ಲಿ ಮಲೇಷ್ಯಾದ ಆಟಗಾರ ಸಂಪೂರ್ಣ ನಿಯಂತ್ರಣ ಸಾಧಿಸಿದರು.
ಪ್ರಪಂಚ ಶ್ರೇಯಾಂಕದಲ್ಲಿ 24ನೇ ಸ್ಥಾನದಲ್ಲಿರುವ 27 ವರ್ಷದ ಅಭಯ್ ಸಿಂಗ್, ಪಾಕಿಸ್ತಾನದ ಮುಹಮ್ಮದ್ ಅಶಬ್ ಇರ್ಫಾನ್ ವಿರುದ್ಧ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಈ ಸಾಧನೆಯೊಂದಿಗೆ ಅಭಯ್, ಏಷ್ಯನ್ ಗೇಮ್ಸ್ ಪುರುಷರ ಸಿಂಗಲ್ಸ್ ಫೈನಲ್ ತಲುಪಿದ ಸೌರವ್ ಘೋಸಾಲ್ ನಂತರದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಆದರೆ ಈ ಸೋಲಿನಿಂದಾಗಿ ಸ್ಕ್ವಾಷ್ ಮೊದಲ ಬಾರಿಗೆ ಸೇರ್ಪಡೆಯಾಗುತ್ತಿರುವ ಎಲ್‌ಎ 2028 ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ಅವಕಾಶವನ್ನು ಅಭಯ್ ಕಳೆದುಕೊಂಡಿದ್ದಾರೆ. ಅತ್ತ ಈನ್ ಯೋ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವುದರ ಜೊತೆಗೆ, ಇಡೀ ಸ್ಪರ್ಧೆಯಲ್ಲಿ ಒಂದೇ ಒಂದು ಗೇಮ್ ಸಹ ಸೋಲದೆ ಒಲಿಂಪಿಕ್ಸ್ ಅರ್ಹತೆ ಗಳಿಸಿದ ಮೊದಲ ಸ್ಕ್ವಾಷ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅನಾಹತ್ ಸಿಂಗ್ ಸಾಧನೆ
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅನಾಹತ್ ಸಿಂಗ್, ಜಪಾನ್‌ನ ಸಟೋಮಿ ವಟನಾಬೆ ವಿರುದ್ಧ ರೋಚಕ ಪುನರಾಗಮನದ ಗೆಲುವು ಸಾಧಿಸಿ, ಏಷ್ಯನ್ ಗೇಮ್ಸ್ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದರು. ಫೈನಲ್‌ನಲ್ಲಿ ಅವರು ಮಲೇಷ್ಯಾದ ಶಿವಸಂಗರಿ ಸುಬ್ರಮಣಿಯಂ ವಿರುದ್ಧ 11-4, 11-4, 11-7 ಅಂತರದಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಇದಕ್ಕೂ ಮುನ್ನ, ಜೋಶ್ನಾ ಚಿನಪ್ಪ ಮತ್ತು ವೇಲಾವನ್ ಸೆಂಥಿಲ್‌ಕುಮಾರ್ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಸ್ಕ್ವಾಷ್ ಪದಕ ಖಾತೆ ತೆರೆದಿತ್ತು. ಇದೀಗ ಅನಾಹತ್ ಮತ್ತು ಅಭಯ್ ಇಬ್ಬರೂ ಬೆಳ್ಳಿ ಪದಕಗಳನ್ನು ಸೇರಿಸುವ ಮೂಲಕ, ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ತಂಡ ಸ್ಪರ್ಧೆಗಳಲ್ಲಿಯೂ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.
ಬಾಕ್ಸಿಂಗ್‌ನಲ್ಲಿ ಅಂಕುಶ್ ಪಾಂಘಾಲ್‌ಗೆ ಪದಕ ಖಚಿತ
ಪುರುಷರ 80 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ಅಂಕುಶ್ ಪಾಂಘಾಲ್, ತಜಿಕಿಸ್ತಾನದ ಸಲಿಮೊವ್ ನೆಕ್ರುಜ್ ವಿರುದ್ಧ 5-0 ಅಂತರದ ಸರ್ವಾನುಮತದ ತೀರ್ಪಿನೊಂದಿಗೆ ಶಾನ್‌ದಾರ್ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಗೆಲುವಿನೊಂದಿಗೆ ಅಂಕುಶ್ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನಾದರೂ ಖಚಿತಪಡಿಸಿದ್ದಾರೆ.
ತಮ್ಮ ಮೊದಲ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 21 ವರ್ಷದ ಅಂಕುಶ್, ಈ ಹಿಂದೆ ಬ್ರೂನೈ ಮತ್ತು ಬಹರೈನ್ ಎದುರಾಳಿಗಳನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ಇತ್ತೀಚೆಗಷ್ಟೇ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗೆದ್ದಿದ್ದ ಅಂಕುಶ್, ಈಗ ಏಷ್ಯನ್ ಗೇಮ್ಸ್‌ನಲ್ಲಿಯೂ ಪದಕದ ಬೇಟೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಈ ಗೆಲುವಿನಿಂದ ಭಾರತದ ಬಾಕ್ಸಿಂಗ್ ತಂಡದ ಉತ್ತಮ ಪ್ರದರ್ಶನ ಮುಂದುವರೆದಂತಾಗಿದೆ.
ಒಟ್ಟಾರೆ ಭಾರತದ ಪ್ರದರ್ಶನ
ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ಸ್ಕ್ವಾಷ್‌ನಲ್ಲಿ ಈಗಾಗಲೇ ಒಂದು ಕಂಚು ಮತ್ತು ಎರಡು ಬೆಳ್ಳಿ ಪದಕಗಳು ಖಚಿತವಾಗಿವೆ. ಬಾಕ್ಸಿಂಗ್‌ನಲ್ಲಿ ಅಂಕುಶ್ ಪಾಂಘಾಲ್ ಸೆಮಿಫೈನಲ್ ಪ್ರವೇಶದೊಂದಿಗೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ. ಇನ್ನೂ ಹಲವು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾರತ ಇನ್ನಷ್ಟು ಪದಕಗಳ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
2022ರ ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಸ್ಕ್ವಾಷ್‌ನಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚು ಸೇರಿ ಐದು ಪದಕಗಳನ್ನು ಗೆದ್ದಿದ್ದ ಭಾರತ ತಂಡ, ಈ ಬಾರಿಯೂ ತಂಡ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಪುರುಷರ ತಂಡದಲ್ಲಿ ಅಭಯ್, ವೀರ್, ವೇಲಾವನ್ ಮತ್ತು ಸೂರಜ್ ಅವರಿದ್ದರೆ, ಮಹಿಳಾ ತಂಡದಲ್ಲಿ ಅನಾಹತ್, ಜೋಶ್ನಾ, ತನ್ವಿ ಮತ್ತು ಶಮೀನಾ ಸ್ಪರ್ಧಿಸಲಿದ್ದಾರೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಮುಂಬೈನಲ್ಲಿ ಭೀಕರ ದುರಂತ: ಸಾರ್ವಜನಿಕ ಶೌಚಾಲಯದಲ್ಲಿ ವಿಷಾನಿಲ ಸೋರಿಕೆ, ಇಬ್ಬರು ಯುವಕರು ಉಸಿರುಗಟ್ಟಿ ಸಾವು!
ಗದಗ: ಹಣ ಕೊರತೆಯಿಂದ ಒತ್ತಡ, ಪತ್ರ ಬರೆದಿಟ್ಟು ಕೆಆರ್‌ಐಡಿಎಲ್ ಎಂಜಿನಿಯರ್ ನಾಪತ್ತೆ.