ಬ್ರೇಕಿಂಗ್: ಸಂಭವನೀಯ ಅಗ್ನಿ-6 ಖಂಡಾಂತರ ಕ್ಷಿಪಣಿ (ICBM) ಪರೀಕ್ಷೆ? 11,000 ಜನ ದಿಢೀರ್ ಸ್ಥಳಾಂತರ, NOTAM ಜಾರಿ.
ವರದಿಗಾರರು (Reporter)
Hemanth Rajashekar03:02 AM IST

ಭಾರತೀಯ ರಕ್ಷಣಾ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಎನ್ನಲಾದ ‘ಅಗ್ನಿ-6’ (Agni-6 ICBM) ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗಕ್ಕೆ ಕ್ಷಣಗಣನೆ ಆರಂಭವಾಗಿದೆಯೇ? ಇಂತಹದೊಂದು ಬಲವಾದ ಚರ್ಚೆ ಹಾಗೂ ಸಂಚಲನ ದೇಶದ ರಕ್ಷಣಾ ವಲಯದಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂದೀಪುರದಲ್ಲಿರುವ ಸಮಗ್ರ ಪರೀಕ್ಷಾ ವ್ಯಾಪ್ತಿ (ITR) ಕೇಂದ್ರದ ಸುತ್ತಮುತ್ತಲಿನ ಹಳ್ಳಿಗಳಿಂದ ಬರೋಬ್ಬರಿ 11,000ಕ್ಕೂ ಹೆಚ್ಚು ಜನರನ್ನು ಮತ್ತು ಅವರ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ದಿಢೀರನೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈ ಕ್ಷಿಪಣಿ ಪರೀಕ್ಷೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದಿದ್ದರೂ, ಸ್ಥಳೀಯ ಆಡಳಿತ ಕೈಗೊಂಡಿರುವ ಈ ಬೃಹತ್ ಮುನ್ನೆಚ್ಚರಿಕೆ ಕ್ರಮಗಳು ಭಾರತದ ಮುಂದಿನ ಪೀಳಿಗೆಯ ಪರಮಾಣು ಸಾಮರ್ಥ್ಯದ ಮಹಾಕ್ಷಿಪಣಿಯ ಉಡಾವಣೆಗೆ ವೇದಿಕೆ ಸಿದ್ಧವಾಗಿರುವುದನ್ನು ಸೂಕ್ಷ್ಮವಾಗಿ ಸಾರುತ್ತಿವೆ.
ಕರಾವಳಿ ಹಳ್ಳಿಗಳಿಗೆ ಖಾಲಿ ಮಾಡುವಂತೆ ಆದೇಶ!
ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿ ಪರೀಕ್ಷೆಗಳ ವೇಳೆ ಇಷ್ಟು ದೊಡ್ಡ ಮಟ್ಟದ ಸ್ಥಳಾಂತರ ಪ್ರಕ್ರಿಯೆ ನಡೆಯುವುದಿಲ್ಲ. ಆದರೆ, ಚಾಂದೀಪುರದ ಲಾಂಚ್ ಕಾಂಪ್ಲೆಕ್ಸ್-3 (LC-3) ರೇಡಿಯಸ್ ವ್ಯಾಪ್ತಿಯಲ್ಲಿ ಬರುವ ಸುಮಾರು 1 ಕಿಲೋಮೀಟರ್‌ನಿಂದ 3.5 ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳ ಜನರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿದೆ.
ಸುಮಾರು 11,000ಕ್ಕೂ ಹೆಚ್ಚು ನಾಗರಿಕರು ಹಾಗೂ ಅವರ ಸಾಕುಪ್ರಾಣಿಗಳನ್ನು ಬಾರ್ದನ್‌ಪುರ ಸೈಕ್ಲೋನ್ ಶೆಲ್ಟರ್, ಬಾರ್ದನ್‌ಪುರ ಹೈಸ್ಕೂಲ್ ಮತ್ತು ಭೀಮಪುರ ಮಲ್ಟಿಪರ್ಪಸ್ ಶೆಲ್ಟರ್ ಸೇರಿದಂತೆ ವಿವಿಧ ತಾತ್ಕಾಲಿಕ ನಿರಾಶ್ರಿತ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲಾ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಪಡೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಭದ್ರತಾ ಪ್ರೋಟೋಕಾಲ್ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಪರೀಕ್ಷೆ ಮುಗಿದು ಸುರಕ್ಷತೆಯ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ಜನರಿಗೆ ಮರಳಲು ಅವಕಾಶ ನೀಡಲಾಗುತ್ತದೆ.

ಏನಿದು ಅಗ್ನಿ-6? ಜಗತ್ತನ್ನೇ ನಡುಗಿಸಬಲ್ಲ ಬ್ರಹ್ಮಾಸ್ತ್ರದ ವಿಶೇಷತೆ ಇಲ್ಲಿದೆ:
ಭಾರತವು ಈಗಾಗಲೇ 5,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಗುರಿಯನ್ನು ಧ್ವಂಸಗೊಳಿಸಬಲ್ಲ ‘ಅಗ್ನಿ-5’ ಕ್ಷಿಪಣಿಯನ್ನು ಯಶಸ್ವಿಯಾಗಿ ಹೊಂದಿದ್ದು, ಇಡೀ ಚೀನಾವನ್ನು ತನ್ನ ವ್ಯಾಪ್ತಿಗೆ ಒಳಪಡಿಸಿದೆ. ಆದರೆ ಈಗ ಚಾನ್ಸಿನಲ್ಲಿರುವ ‘ಅಗ್ನಿ-6’ ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೇರಿಸಲಿದೆ.
- 8,000+ ಕಿಲೋಮೀಟರ್ ವ್ಯಾಪ್ತಿ: ಅಗ್ನಿ-6 ಕ್ಷಿಪಣಿಯು 8,000 ದಿಂದ ಹಿಡಿದು ಸುಮಾರು 10,000 ಕಿಲೋಮೀಟರ್‌ಗಿಂತಲೂ ಹೆಚ್ಚಿನ ದೂರದಲ್ಲಿರುವ ಶತ್ರು target ಅನ್ನು ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಅಂದರೆ ಏಷ್ಯಾ, ಯುರೋಪ್ ಹಾಗೂ ಆಫ್ರಿಕಾದ ಬಹುತೇಕ ಭಾಗಗಳು ಇದರ ವ್ಯಾಪ್ತಿಗೆ ಬರಲಿವೆ.
- MIRV ತಂತ್ರಜ್ಞಾನ (Multiple Independently Targetable Re-entry Vehicle): ಇದು ಈ ಕ್ಷಿಪಣಿಯ ಅತಿ ದೊಡ್ಡ ಶಕ್ತಿ. ಈ ತಂತ್ರಜ್ಞಾನದ ಅಡಿಯಲ್ಲಿ, ಒಂದೇ ಒಂದು ಕ್ಷಿಪಣಿಯು ಆಕಾಶಕ್ಕೆ ಜಿಗಿದು, ಒಮ್ಮೆಗೆ ಬೇರೆ ಬೇರೆ ದಿಕ್ಕಿನಲ್ಲಿರುವ 10 ರಿಂದ 12 ಶತ್ರು ನೆಲೆಗಳ ಮೇಲೆ ಏಕಕಾಲದಲ್ಲಿ ಅಣುಬಾಂಬ್ ದಾಳಿ ನಡೆಸಬಲ್ಲದು. ಶತ್ರು ದೇಶಗಳ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಾದ ಥಾಡ್ (THAAD) ಅಥವಾ ಎಸ್-500 ಗಳಿಗೂ ಇದನ್ನು ಪತ್ತೆ ಹಚ್ಚಿ ಹೊಡೆದುರುಳಿಸುವುದು ಅಸಾಧ್ಯ.
- ಖಂಡಾಂತರ ಕ್ಷಿಪಣಿ (ICBM) ಶಕ್ತಿ: ಒಂದು ಖಂಡದಿಂದ ಮತ್ತೊಂದು ಖಂಡದ ಗುರಿಯನ್ನು ತಲುಪಬಲ್ಲ ಈ ತಂತ್ರಜ್ಞಾನ ಜಗತ್ತಿನ ಕೆಲವೇ ಕೆಲವು ಆಯ್ದ ಮಹಾಶಕ್ತಿಗಳ ಬಳಿ ಮಾತ್ರ ಇದೆ.
ರಹಸ್ಯ ಕಾಯ್ದುಕೊಂಡ ಡಿಆರ್‌ಡಿಒ
ಯಾವುದೇ ಪ್ರಮುಖ ಅಥವಾ ಸಂವೇದನಾಶೀಲ ಯುದ್ಧತಂತ್ರದ ಕ್ಷಿಪಣಿಗಳನ್ನು ಪರೀಕ್ಷಿಸುವ ಮುನ್ನ ರಕ್ಷಣಾ ಸಚಿವಾಲಯ ಅಥವಾ DRDO ಮುಂಚಿತವಾಗಿ ಮಾಹಿತಿಯನ್ನು ಬಿಟ್ಟುಕೊಡುವುದಿಲ್ಲ. ಪರೀಕ್ಷೆ ಯಶಸ್ವಿಯಾದ ಬಳಿಕವಷ್ಟೇ ಅಧಿಕೃತ ಪ್ರಕಟಣೆ ಹೊರಬೀಳುವುದು ವಾಡಿಕೆ. ಈಗ ಚಾಂದೀಪುರದಲ್ಲಿ ವಾಯುಪ್ರದೇಶ ನಿರ್ಬಂಧ (NOTAM) ಹಾಗೂ ಬೃಹತ್ ಜನ ಸ್ಥಳಾಂತರ ನಡೆದಿರುವುದು ಜಾಗತಿಕ ರಕ್ಷಣಾ ವಿಶ್ಲೇಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಇದು ಅಗ್ನಿ-6 ಕ್ಷಿಪಣಿಯದೇ ಪರೀಕ್ಷೆಯಾಗಿದ್ದಲ್ಲಿ, ಜಾಗತಿಕ ರಕ್ಷಣಾ ಭೂಪಟದಲ್ಲಿ ಭಾರತದ ಪ್ರಾಬಲ್ಯ ಮತ್ತಷ್ಟು ಅಧಿಕವಾಗುವುದರಲ್ಲಿ ಸಂಶಯವಿಲ್ಲ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: